ಬೆಂಗಳೂರು: ಸ್ಪೀಕರ್ ಸ್ಥಾನದ ಕುರಿತು ವಿವಾದಾತ್ಮ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ವಿರುದ್ಧ ಬಿಜೆಪಿ ಡಿ.4 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧದ ಸದನದ ಒಳಗೆ, ಹೊರಗೂ ಹಮ್ಮಿಕೊಂಡಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಲು ಬಿಜೆಪಿ ಸಿದ್ಧತೆ ನಡೆಸಿದ್ದು, ಇದರ ಉಸ್ತುವಾರಿಯನ್ನು ಮಹೇಶ್ ಟೆಂಗಿನಕಾಯಿ ಅವರಿಗೆ ನೀಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ತನ್ನ ಭಾಷಣದಲ್ಲಿ ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳ ಬಗ್ಗೆ ಸಭೀಕರಿಗೆ ಹೇಳುತ್ತಿದ್ದರು. ಈ ವೇಳೆ ಮಾತನಾಡಿದ ಅವರು, “ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಯಾವ ಮುಸ್ಲಿಂ ಸ್ಪೀಕರ್ ಆಗಿರಲಿಲ್ಲ. ಮೊದಲ ಬಾರಿಗೆ ಯು.ಟಿ ಖಾದರ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ನೇಮಿಸಲಾಗಿದೆ. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ” ಎಂದು ಹೇಳಿದ್ದರು. ಇದನ್ನೇ ಈಗ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ.