ಹಾವೇರಿ: ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯುವ ಮೂಲಕ ಸಚಿವ ಸಂಪುಟದ ಪಾವಿತ್ರ್ಯತೆಯನ್ನು ಹಾಳು ಮಾಡಿದೆ. ಈ ಕುರಿತು ನಾವು ಕೂಡಾ ಕೋರ್ಟ್ನಲ್ಲಿ ಹೋರಾಟ ಮಾಡುತ್ತೇವೆ. ಸಿಬಿಐಗೆ ಕೊಟ್ಟಿದ್ದ ಅನುಮತಿ ಸರ್ಕಾರ ಹಿಂಪಡೆದಿದ್ದನ್ನು ಕೋರ್ಟ್ ಒಪ್ಪಲ್ಲ. ಕೋರ್ಟ್ಗೆ ಹೆಚ್ಚಿನ ದಾಖಲೆ ನೀಡುವ ಸಂದರ್ಭ ಬಂದರೆ ಒದಗಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ವರ್ಗಾವಣೆ ದಂಧೆ ನಡೆಯುತ್ತಿದ್ದು, ನನ್ನ ಬಳಿ ದಾಖಲೆಗಳಿವೆ. ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿಸಿದರೆ ದಾಖಲೆಗಳನ್ನು ಕೊಡುತ್ತೇನೆ. ಕಾಂಗ್ರೆಸ್ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದೆ. ಮುಂದಿನ ಚುನಾವಣೆಯಲ್ಲಿ ಜನ ಬುದ್ದಿ ಕಲಿಸುತ್ತಾರೆ. ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಲಂಚ ಪಡೆದು ಉನ್ನತ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.