ಬೆಳಗಾವಿ: ಅಥಣಿ ವಿಧಾನಸಭೆ ಕ್ಷೇತ್ರದ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ತನ್ನ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಇಂದು ಅಥಣಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಿಜೆಪಿಗೆ ರಾಜೀನಾಮೆ ಕೊಡಲು ತೀರ್ಮಾನ ಮಾಡಿದ್ದೇನೆ. ನಾಳೆ ಕ್ಷೇತ್ರದ ಜನರ ಜತೆ ಚರ್ಚಿಸಿ ಘೋಷಣೆ ಮಾಡುತ್ತೇನೆ. ನಾನು ಸ್ವಾಭಿಮಾನಿ ರಾಜಕಾರಣಿ, ಲಜ್ಜೆಗಟ್ಟ ರಾಜಕಾರಣಿ ಅಲ್ಲ. ಅಂತಸ್ತು ಯಾವತ್ತೂ ಶಾಸ್ವತ ಅಲ್ಲ. ವಿಶ್ವಾಸ ಕೊನೆವರೆಗೂ ಇರುತ್ತದೆ. ಅಧಿಕಾರಿದ ಅಮಲಿನಲ್ಲಿ ನಾನಿಲ್ಲ. ಜಿಲ್ಲೆಯಲ್ಲಿ ಯಾರು ಬೆನ್ನಿಗೆ ಚೂರಿ ಹಾಕಿಲ್ಲ. ಬಿಜೆಪಿ ಟಿಕೆಟ್ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವೇ? ಅಥಣಿ ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ. ಬಿಜೆಪಿ ಎಲ್ಲ ಹಿರಿಯರಿಗೆ, ಬಿಎಸ್ ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್ ಸೇರಿ ಎಲ್ಲರಿಗೆ ಅಭಿನಂದನೆ. ನನ್ನಿಂದ ಏನಾದರೂ ತಪ್ಪಾದರೆ ಕ್ಷಮಿಸಿ” ಎಂದು ಹೇಳಿದರು.