ದೆಹಲಿ: ಚುನಾವಣಾ ಬಾಂಡ್ ಗಳ ಖರೀದಿ ಮತ್ತು ನಗದೀಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾರ್ಚ್ 12 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಡೇಟಾವನ್ನು ಸ್ವೀಕರಿಸಿರುವ ಭಾರತೀಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ತನ್ನ ವೆಬ್‌ಸೈಟ್‌ನಲ್ಲಿ (https://www.eci.gov.in/disclosure-of-electoral-bonds) ಗುರುವಾರ ಅಪ್ಲೋಡ್ ಮಾಡಿದೆ.
ಬಾಂಡ್ ಗಳಲ್ಲಿ ದೇಶದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಗೆ ಪ್ರಮುಖ ಕಂಪನಿಗಳು ಟ್ರಸ್ಟ್ ಮೂಲಕ ದೇಣಿಗೆ ಸಂದಾಯವಾಗಿದೆ. ಪ್ರೊಡೆಂಟ್ ಎಲೆಕ್ಟ್ರಾಲ್ ಟ್ರಸ್ಟ್ 2013ರಿಂದ 2,255 ಕೋಟಿಯಷ್ಟು ಮೊತ್ತವನ್ನು ಬಿಜೆಪಿಗೆ ನೀಡಿದೆ. ಇದರ ಪಾಲು ಶೇ 75ರಷ್ಟು. ಇದು ಕಾಂಗ್ರೆಸ್‌ಗೆ ಸಲ್ಲಿಕೆಯಾದ 167 ಕೋಟಿಗೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚು. ಭಾರ್ತಿ ಏರ್‌ಟೆಲ್ ಕಂಪನಿಯು 2022ರ ಜ. 13ರಂದು 25 ಕೋಟಿಯನ್ನು ಹಾಗೂ 2021ರ ಮಾರ್ಚ್ 25ರಂದು 15 ಕೋಟಿ ನೀಡಿದೆ. ಈ ಮೊತ್ತವನ್ನು ಬಿಜೆಪಿಗೆ ಚೆಕ್ ರೂಪದಲ್ಲಿ ಟ್ರಸ್ಟ್ ನೀಡಿದೆ. ಕಳೆದು 2 ವರ್ಷಗಳಲ್ಲಿ ಡಿಎಲ್‌ಎಫ್ ಸಮೂಹ 20.1 ಕೋಟಿ, ಅರ್ಸಲ್ ಮಿತ್ತಲ್ 20 ಕೋಟಿ ಹಾಗೂ ಜಿಎಂಆರ್ ಸಮೂಹದಿಂದ 20 ಕೋಟಿ ರೂ. ಬಿಜೆಪಿಗೆ ಸಲ್ಲಿಕೆಯಾಗಿದೆ. ಹೀಗೆ ಒಟ್ಟು ಪ್ರೊಡೆಂಟ್‌ನಿಂದ ಈ ಅವಧಿಯಲ್ಲಿ ಬಿಜೆಪಿಗೆ 220 ಕೋಟಿ ಸಲ್ಲಿಕೆಯಾಗಿದೆ ಎಂದು ರಾಯಿಟರ್ಸ್ (reuters.com) ವರದಿ ಮಾಡಿದೆ.
ಆಯೋಗದ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಡೇಟಾವನ್ನು ಎರಡು ಭಾಗಗಳಲ್ಲಿ ಹಂಚಿಕೊಳ್ಳಲಾಗಿದ್ದು, ಮೊದಲ ಸೆಟ್ ಡೇಟಾವು ಬಾಂಡ್‌ಗಳ ಖರೀದಿದಾರರ ಹೆಸರು, ದಿನಾಂಕ ಮತ್ತು ಮುಖಬೆಲೆಯನ್ನು ಒಳಗೊಂಡಿದ್ದರೆ, ಎರಡನೇ ಸೆಟ್ ನಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳು ನಗದು ಮಾಡಿದ ಬಾಂಡ್‌ಗಳ ಬೆಲೆ, ದಿನಾಂಕವನ್ನು ಪ್ರಕಟಿಸಲಾಗಿದೆ. ಚುನಾವಣಾ ಬಾಂಡ್ನ ಮಾಹಿತಿಯಲ್ಲಿ ಯಾರು ದಾನ ಮಾಡಿದ್ದನ್ನು ಯಾವ ಪಕ್ಷ ಪಡೆದುಕೊಂಡಿದೆ ಎಂಬ ಮಾಹಿತಿ ಇಲ್ಲ. ದಾನಿ ಮತ್ತು ಪಕ್ಷಗಳ ನಡುವಿನ ನೇರ ವ್ಯವಹಾರದ ಮಾಹಿತಿಯನ್ನು ಕೊಟ್ಟಿಲ್ಲ. ಬದಲಾಗಿ ಎಷ್ಟು ಬಾಂಡ್ಗಳಿವೆ, ಅವುಗಳ ಬೆಲೆ, ಎಷ್ಟು ಬಾಂಡ್‌ಗಳನ್ನು ಪಕ್ಷಗಳು ನಗದು ಮಾಡಿಕೊಂಡಿವೆ ಎಂಬ ಮಾಹಿತಿಯಷ್ಟೇ ಇದೆ. ಒಟ್ಟು ಮಾಹಿತಿಯನ್ನು ಐನೂರು ಪುಟಗಳಲ್ಲಿ ನೀಡಲಾಗಿದೆ.
ಚುನಾವಣಾ ಬಾಂಡ್‌ಗಳನ್ನು ರಿಡೀಮ್ ಮಾಡಿದ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಎಪಿ ಮತ್ತು ಸಮಾಜವಾದಿ ಪಕ್ಷ ಸೇರಿವೆ. ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್ ವೀಸ್, ಪಿವಿಆರ್, ಕೆವೆಂಟರ್, ಸುಲಾ ವೈನ್, ವೆಲ್ಸ್ಪನ್ ಮತ್ತು ಸನ್ ಫಾರ್ಮಾ ಸೇರಿವೆ.
2018ರಿಂದ ಇದುವರೆಗೆ 30 ಕಂತುಗಳಲ್ಲಿ ಒಟ್ಟು 16,518 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಭಾರತೀಯ ಸ್ಟೇಸ್ ಬ್ಯಾಂಕ್ ವಿತರಿಸಿದೆ. ಕೇಂದ್ರ ಬಿಜೆಪಿ ಸರಕಾರ 2018 ಜನವರಿಯಲ್ಲಿ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಫೆ.15ರಂದು ರದ್ದುಪಡಿಸಿ ಅಸಾಂವಿಧಾನಿಕ ಎಂದು ಮಹತ್ವದ ತೀರ್ಪುನೀಡಿತ್ತು ಹಾಗೂ ಚುನಾವಣಾ ಬಾಂಡ್ ಪಡೆದವರ ವಿವರಗಳನ್ನು ಪ್ರಕಟಿಸಬೇಕೆಂದು ಆದೇಶ ನೀಡಿತ್ತು. ವಿವರಗಳನ್ನು ಪ್ರಕಟಿಸಲು ಜೂ.30ರ ವರೆಗೆ ಕಾಲಾವಕಾಶ ನೀಡುವಂತೆ ಎಸ್ ಬಿಐ ಕೋರಿತ್ತು. ಆದರೆ ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ ಚುನಾವಣಾ ಆಯೋಗಕ್ಕೆ ಮಾ.12ರಂದು ಕಚೇರಿ ಕೆಲಸದ ಅವಧಿ ಮುಗಿಯುವ ಮುನ್ನ ಎಲ್ಲಾ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ದಾನಿಗಳಿಂದ ಪಡೆದ ದೇಣಿಗೆ ನೀಡಿದ ಮೊತ್ತವನ್ನು ಬಹಿರಂಗಪಡಿಸಲು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.