ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದ್ದು, ರಾಜ್ಯ ಬಿಜೆಪಿ ಸರಕಾರ ಸಾರ್ವಜನಿಕ ವಲಯದ ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ದಿವಾಳಿ ಎಬ್ಬಿಸಲು ಮುಹೂರ್ತ ಇರಿಸಿದೆ.
ಹಲವು ದಶಕಗಳಿಂದ ಸರಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮದ ಬಸ್ ಗಳ ಓಡಾಟ ಪ್ರದೇಶದಲ್ಲಿ ಖಾಸಗಿ ಬಸ್ ಗಳ ಸೇವೆಗೆ ಅವಕಾಶ ನೀಡದಿರುವ (ಎರಿಯ ಸ್ಕೀಂ) ಜನಪರ ನೀತಿಯನ್ನು ಸರಕಾರಗಳು ಹೊಂದಿದ್ದವು. ಆದರೆ, ಇದೀಗ ರಾಜ್ಯ ಸರಕಾರದ ಸಾರಿಗೆ ಇಲಾಖೆ ಸಚಿವ ಶ್ರೀರಾಮುಲು ಅವರು ಸರಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮದ ಮೊನೊಪಾಲಿಯನ್ನು ಕೊನೆಗೊಳಿಸಿ ಹೊಸದಾಗಿ ನ್ಯೂ ಎರಿಯ ಸ್ಕೀಂ ಮೂಲಕ ಹೊಸದಾಗಿ ಬಸ್ ಪರ್ಮಿಟ್ ವಿತರಿಸಲು ತರಾತುರಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸರಕಾರದ ಈ ತರಾತುರಿಯೇ ಸರಕಾರದ ಈ ಕ್ರಮದ ಬಗ್ಗೆ ಸಂದೇಹ ಉಂಟು ಮಾಡಿದೆ.
“ಹಿಂದಿನ ಎರಿಯ ಸ್ಕೀಂ ವಿರುದ್ಧ ಖಾಸಗಿ ಸ್ಟೇಜ್ ಕ್ಯಾರೇಜ್ (ಬಸ್) ಮಾಲೀಕರು ಸಲ್ಲಿಸಿದ ಅರ್ಜಿಯು ಕರ್ನಾಟಕ ರಾಜ್ಯ ಹೈಕೋರ್ಟಿನಲ್ಲಿ ತೀರ್ಪಿನ ಹಂತದಲ್ಲಿದ್ದಾಗಲೇ ಕೋರ್ಟು ತೀರ್ಪಿಗೂ ಕಾಯದೆ ಸರಕಾರದ ತರಾತುರಿಯಲ್ಲಿ ಹೊಸ ಸ್ಕೀಂ ನಲ್ಲಿ ಬಸ್ ಪರ್ಮಿಟ್ ನೀಡಲು ಮುಂದಾಗಿರುವುದು ಇನ್ನಷ್ಟು ಸಂಶಯಗಳಿಗೆ ಎಡೆ ಮಾಡಿದೆ. ಸರಕಾರ 24 ಕಿ.ಮೀ ವಿಸ್ತರಣೆ ಅಂತ ಹೇಳುತ್ತಿದ್ದರೂ ಅದು ಜಾರಿಗೆ ಬಂದಾಗ ಗೊಂದಲಗಳು ಉಂಟಾಗಲಿದೆ” ಎನ್ನುತ್ತಾರೆ ಬಸ್ ಮಾಲಕರು
ಈ ಸ್ಕೀಂ ಜಾರಿಯಾದಾಗ ಕರಾವಳಿಯನ್ನು ಹೊರತುಪಡಿಸಿ ರಾಜ್ಯದ ಇತರ ಎಲ್ಲ ವಲಯಗಳಲ್ಲಿ ಸರಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮಗಳು ದಿವಾಳಿ ಆಗುವುದು ಖಚಿತ ಎನ್ನುತ್ತಾರೆ ಉದ್ಯಮದ ಮಂದಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ಹೊರತುಪಡಿಸಿ ಉಳಿದೆಲ್ಲ ನಿಗಮಗಳು ಈಗಾಗಲೇ ನಷ್ಟದಲ್ಲಿ ಇವೆ ಎಂದು ಹೇಳಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇಂತಹ ಕ್ರಮಕ್ಕೆ ಮುಂದಾಗಿರುವುದು ಹಲವು ಹಗರಣಗಳನ್ನು ನಡೆಸಿರುವ ಸರಕಾರದ ಬಗ್ಗೆ ಸಂಶಯಗಳು ಮೂಡಿಸಿದೆ.
“ಜನ ಸಾಮನ್ಯರಿಗೆ ಉದ್ಯೋಗ ಒದಗಿಸುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ನಾಶ ಮಾಡುವುದೇ ಆಡಳತ ಪಕ್ಷದ ನೀತಿ ಆಗಿರುವಂತಿದೆ. ಹೊಸ ನೀತಿಯು ಜಾರಿಗೆ ಬಂದಾಗ ಕೇವಲ ಸರಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮಗಳು ಮಾತ್ರವಲ್ಲದೆ ಹಲವಾರು ದಶಕಗಳಿಂದ ಇದೇ ಉದ್ಯಮ ನಡೆಸುತ್ತಿರುವವರು ಕೂಡ ದಿವಾಳಿ ಆಗಲಿದೆ” ಎನ್ನುತ್ತಾರೆ ಬಸ್ ಮಾಲೀಕರ ಸಂಘದ ಪ್ರತಿನಿಧಿಗಳು.
ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ನಿಗಮಗಳು ಈಗಾಗಲೇ ಸರಕಾರದ ನೀತಿಯನ್ನು ವಿರೋಧಿಸಿ ಪತ್ರ ಬರೆದಿವೆ. ಆದರೆ, ರಾಜಕೀಯ ಪಕ್ಷಗಳು ಸರಕಾರದ ನೀತಿಯನ್ನು ಇದುವರೆಗೆ ವಿಮರ್ಶೆ ಮಾಡಿಲ್ಲ.