ಚಾಮರಾಜನಗರ: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ (61) (KPCC Working President R.Dhruvanarayana) ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾಗಿದ್ದಾರೆ.
ಇಂದು ಬೆಳಗ್ಗೆ 6.30ರ ವೇಳೆಗೆ ಧ್ರುವನಾರಾಯಣ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು . ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಆರ್.ಧ್ರುವನಾರಾಯಣ ತೀವ್ರ ರಕ್ತಸ್ರಾವ ಆಗಿ ಮೃತಪಟ್ಟಿದ್ದಾರೆ. ನಾವು ನೋಡಿದಾಗ ಧ್ರುವನಾರಾಯಣ ಕೋಮಾ ಸ್ಥಿತಿಯಲ್ಲಿದ್ದರು ಎಂದು ಧ್ರುವನಾರಾಯಣಗೆ ಚಿಕಿತ್ಸೆ ನೀಡಿದ ವೈದ್ಯ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಧ್ರುವನಾಯಣ ಅವರು ಪತ್ನಿ , ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
1983ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಆರ್. ಧ್ರುವನಾರಾಯಣ ಅವರು 1986ರಲ್ಲಿ ಎನ್.ಎಸ್.ಯು.ಐ ಬೆಂಗಳೂರು ಘಟಕದ ಅಧ್ಯಕ್ಷರಾಗಿದ್ದರು. ಚಾರಾಜನಗರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೊಳ್ಳೇಗಾಲ ಕ್ಷೇತ್ರದಿಂದ 1 ಬಾರಿ, ಸಂತೇಮರಹಳ್ಳಿ ಕ್ಷೇತ್ರದಿಂದ 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿ. ಶ್ರೀ ನಿವಾಸ ಪ್ರಸಾದ್ ಅವರ ಎದುರು ಸೋಲು ಕಂಡಿದ್ದ ಅವರು, ಈ ಬಾರಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು.
ಅವರ ನಿಧನಕ್ಕೆ ಅನೇಕ ರಾಜಕೀಯ ನಾಯಕರುಗಳು ಸಂತಾಪ ಸೂಚಿಸಿದ್ದಾರೆ.