ಮಂಗಳೂರು: ನಗರದ ಪಂಪ್ ವೆಲ್ ನಾಗುರಿ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಗುರುಬೆಳದಿಂಗಳು ಫೌಂಡೇಶನ್ ನಿಂದ 6 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದ ಮನೆಯನ್ನು ಕುಟುಂಬದ ಸದಸ್ಯರು, ಸಂಬಂಧಿಕರ ಸಮ್ಮು ಖದಲ್ಲಿ ಇಂದು ಹಸ್ತಾಂತರಿಸಲಾಯಿತು.
2022ರ ನವೆಂಬರ್ 19 ರಂದು ನಗರದ ರಾ.ಹೆ.75ರ ನಾಗುರಿ ಎಂಬಲ್ಲಿ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟ ನಡೆದಿತ್ತು. ಘಟನೆಯಲ್ಲಿ ಗೋರಿಗುಡ್ಡ ನಿವಾಸಿ ಪುರುಷೋತ್ತಮ ಪೂಜಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಪುರುಷೋತ್ತಮ ಅವರ ಪುತ್ರಿಯ ಮದುವೆ ನಿಶ್ಚಯವಾಗಿದ್ದರಿಂದ, ಮನೆಯ ದುರಸ್ತಿ ಕಾರ್ಯ ಆಗಬೇಕಿತ್ತು. ಆದರೆ ಈ ದುರ್ಘಟನೆ ಬಳಿಕ ಮನೆ ದುರಸ್ತಿಯಾಗದೆ ಪುರುಷೋತ್ತಮ ಅವರು ಕಂಗೆಟ್ಟಿದ್ದರು. ದುರಂತದ ಬಳಿಕ ತಮ್ಮನ್ನು ಭೇಟಿಯಾದ ‘ಗುರುಬೆಳದಿಂಗಳು ಫೌಂಡೇಶನ್’ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಂಡದ ಬಳಿ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದರು.
‘ಮನೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಗುರುಬೆಳದಿಂಗಳು ಫೌಂಡೇಶನ್ ವಹಿಸಲಿದೆ. ನೀವು ಯಾವುದಕ್ಕೂ ಚಿಂತೆ ಮಾಡಬೇಡಿ. ಸರ್ಕಾರ ನಿಮಗೆ ಸ್ಪಂದಿಸದಿದ್ದರೂ ನಾವು ಸದಾ ನಿಮ್ಮೊಂದಿಗೆ ಇದ್ದೇವೆ’ ಎಂದು ಪದ್ಮರಾಜ್ ಅವರು ಭರವಸೆ ನೀಡಿದ್ದರು.
ಅದರಂತೆ ಇಂದು ಸಮರ್ಪಕ ಸೂರಿಲ್ಲದೆ ಪರಿತಪಿಸುತ್ತಿದ್ದ ಅಸಹಾಯಕನಿಗೆ ವಕೀಲ ಪದ್ಮರಾಜ್ ಆರ್.ಸಾರಥ್ಯದ ‘ಗುರುಬೆಳದಿಂಗಳು’ ಸಂಸ್ಥೆ ಮನೆಯನ್ನು ನವೀಕರಣಗೊಳಿಸಿ ಯುಗಾದಿ ಹಬ್ಬದ ಗಿಫ್ಟ್ ನೀಡಿದೆ. ಆ ಮೂಲಕ ಪುರುಷೋತ್ತಮ ಬದುಕಿಗೆ ಚೈತನ್ಯ ತುಂಬಿದಾಗಿದೆ.
ಈ ಸಂದರ್ಭ ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್.ಆರ್, ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ.ಜೆ.ಬಿ.ಕ್ರಾಸ್ತಾ, ಮಾಜಿ ರಾಜ್ಯ ಸಭಾ ಸದಸ್ಯ ಬಿ.ಇಬ್ರಾಹೀಂ, ಉದ್ಯಮಿಗಳಾದ ರೋಹನ್ ಮೊಂತೆರೋ, ರಘುನಾಥ್ ಮಾಬೆನ್, ಧರ್ಮರಾಜ ಅಮ್ಮುಂಜೆ, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ , ಮಾಜಿ ಕಾರ್ಪೊರೇಟರ್ ಡಿ.ಕೆ.ಅಶೋಕ್ ಕುಮಾರ್, ಇಂಡಿಯಾನ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಸತ್ಯ ಜಿತ್ ಸುರತ್ಕಲ್, ಪ್ರಮುಖರಾದ ದೇವೇಂದ್ರ ಪೂಜಾರಿ, ಮೋಹನ್ ನೆಕ್ಕ ರೆಮಾರು, ಸೂರ್ಯಕಾಂತಿ ಸುವರ್ಣ, ಆಲ್ವಿನ್ ಪ್ರಕಾಶ್, ನಾಗವೇಣಿ, ಹಿತಾ ಪ್ರವೀಣ್ ಕುಮಾರ್, ಶೈಲೇಂದ್ರ ಸುವರ್ಣ, ರೋಹಿತ್ ಕುವೈತ್, ಜಯಾನಂದ ಪೂಜಾರಿ, ರಾಜೇಶ್ ಬಿ., ಪ್ರವೀಣ್ ಕುಮಾರ್ ಹಾಗೂ ಗುರುಬೆಳದಿಂಗಳು ಫೌಂಡೇಶನ್ನ ಪದಾಧಿಕಾರಿಗಳು, ಸದಸ್ಯ ರು ಪಾಲ್ಗೊಂಡಿದ್ದರು.


