ಮಂಗಳೂರು: ನಿರೀಕ್ಷೆಯಂತೆ ಬಿಲ್ಲವ ಸಮುದಾಯದ ಸಂಘಟಕ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ನ್ಯಾಯವಾದಿ ಪದ್ಮರಾಜ್ ರಾಮಯ್ಯ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೈಕಮಾಂಡ್ ಕಣಕ್ಕಿಳಿಸಿದೆ.
ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿಯ ಗರಡಿಯಲ್ಲಿ ಪಳಗಿರುವ ಪದ್ಮರಾಜ್ ಸರಳ ಸಜ್ಜನಿಕೆಯ ನೇರ ನುಡಿಯ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಿರಿಯ ವಯಸ್ಸಿನಲ್ಲೇ ಕುದ್ರೋಳಿ ಗೋಕರ್ಣನಾಥ ದೇವಳದ ಕೋಶಾಧಿಕಾರಿಯಾಗಿ ಕ್ಷೇತ್ರದ ಏಳಿಗೆಗಾಗಿ ದುಡಿಯುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ. ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ಅವರ ಅಣ್ಣ ಡಾ. ಪುರುಷೋತ್ತಮ ಆರ್. ಅವರು ಹೃದ್ರೋಗ ತಜ್ಞರು.
ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ, ಮುಂದೆ ಬಿ.ಎ. ಪದವಿಯನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು. 1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದ್ದರು.
ಪದ್ಮರಾಜ್ ನಾಲ್ಕು ವರ್ಷಗಳ ಬಳಿಕ ಬಳ್ಳಾಲ್‌ಬಾಗ್‌ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್‌ನ ಸದಸ್ಯರಾದರು. ರಾಜಕೀಯ ಪಕ್ಷದಲ್ಲಿ ಇರದಿದ್ದರೂ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯವರ ಎಲ್ಲ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದಾರೆ.
25 ವರ್ಷದಿಂದ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭ ಬಿ.ಜನಾರ್ದನ ಪೂಜಾರಿಯವರ ಆದೇಶದಂತೆ ದಿನಂಪ್ರತಿ ದೇವಸ್ಥಾನ ವತಿಯಿಂದ ಸುಮಾರು ಒಂದು ಸಾವಿರ ಬಡವರು, ನಿರಾಶ್ರಿತರಿಗೆ ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನ ನಡೆಯುತ್ತಿತ್ತು. ಈ ಸಂದರ್ಭ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದವರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಅನ್ನದಾನ ವಿತರಣೆಯಲ್ಲಿ ಭಾಗಿಯಾಗುತ್ತಿದ್ದರು.
ಪದ್ಮರಾಜ್ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ದೇವಸ್ಥಾನದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 409 ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್‌ಡೌನ್ ಸಂದರ್ಭದಲ್ಲೂ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಗ್ರಿ ತಲುಪಿಸುವ ಕೆಲಸ ಮಾಡಿದ್ದರು.
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರಿಗೆ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸುಸಜ್ಜಿತವಾಗಿ ಮನೆ ನವೀಕರಣಗೊಳಿಸಿ ಕುಟುಂಬಕ್ಕೆ ಆಸರೆಯಾಗಿ ಸುದ್ದಿಯಾಗಿದ್ದರು. ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಣೆ ಸಂದರ್ಭ ಹಾಗೂ 10ನೇ ತರಗತಿಯ ಪಠ್ಯಪುಸ್ತಕದ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಠ್ಯ ಕೈಬಿಟ್ಟದ್ದರ ವಿರುದ್ಧದ ಹೋರಾಟದಲ್ಲಿ ಪದ್ಮರಾಜ್ ಮುಂಚೂಣಿಯಲ್ಲಿದ್ದರು.
ಪ್ರಸ್ತುತ ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರ, ಜೆ.ಪಿ.ಪ್ರತಿಷ್ಠಾನ ದ.ಕ. ಜಿಲ್ಲಾ ಗೌರವ ಸಂಚಾಲಕರಾಗಿದ್ದಾರೆ. ಪಕ್ಷದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದುಡಿಯುತ್ತಿದ್ದಾರೆ.