Monday, December 23, 2024

ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸಾಮಂತ್ ಅನುಮಾನಾಸ್ಪದ ಸಾವು ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ರಮಾನಾಥ ರೈ ಒತ್ತಾಯ

by eesamachara
0 comment

ಬಂಟ್ವಾಳ: ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಸಾಮಂತ್(32) ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಅವರ ಮೃತದೇಹ ಭಾನುವಾರ ಪತ್ತೆಯಾಗಿದೆ.

ಚೆನ್ನೈತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಮದಪದವಿನ ತಿಮರಡ್ಡ ಅವರ ಮನೆ ಬಳಿಯ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪದ್ಮನಾಭರ ಮೃತದೇಹ ಪತ್ತೆಯಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದರು.

ಕಳೆದ ಹಲವು ವರ್ಷಗಳಿಂದ ಸ್ಥಳೀಯವಾಗಿ ಸಾಮಾಜಿಕ ‌ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಪದ್ಮನಾಭ ಅಧಿಕಾರಿಗಳು, ಬಿಜೆಪಿ ನಾಯಕರು ಹಾಗೂ ಭೂಮಾಫಿಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಕ್ರಮವನ್ನು ನಿರ್ಭೀತವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುತ್ತಿದ್ದರು. ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ-ಸಕ್ರಮ ಅವ್ಯವಹಾರ ಸೇರಿದಂತೆ ಹಲವು ಭ್ರಷ್ಟಾಚಾರ, ಲಂಚ, ಅವ್ಯವಹಾರ ಪ್ರಕರಣಗಳನ್ನು ಇವರು ಬಯಲಿಗೆಳೆದಿದ್ದರು. ವಿವಿಧ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಪದ್ಮನಾಭ ಸಾಮಂತ್ ಅವರ ಸಾವು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.

“ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಅನೇಕ ವಿರೋಧಿಗಳನ್ನು ಕಟ್ಟಿಕೊಂಡಿದ್ದರು. ಯಾವುದಕ್ಕೂ ಹಿಂಜರಿಯದೆ, ಯಾರಿಗೂ ಹೆದರದೆ, ಸದಾ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ ಪದ್ಮನಾಭ ಸಾಮಂತ್ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ. ಆತನ ಸಾವಿನ ಬಗ್ಗೆ ನಮಗೆ ಅನುಮಾನವಿದ್ದು, ಸೂಕ್ತ ತನಿಖೆ ಆಗಬೇಕು” ಎಂದು ಕುಟುಂಬಸ್ಥರು ಎಂದು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವ ರಮಾನಾಥ ರೈ, ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆ ನಡೆಸುವಂತೆ ಒತ್ತಾಯಿಸಿದರು. ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಾಮಂತ್ ಹೇಳುತ್ತಿದ್ದನು. ಅದರಿಂದೇನಾದರೂ ಸಾವನ್ನಪ್ಪಿದನೇ ಅಥವಾ ಬೇರೆ ಯಾವ ಕಾರಣ ಕೃತ್ಯ ನಡೆದಿರಬಹುದು ಎಂಬ ಸಂಶಯಗಳ ನಿವಾರಣೆಯಾಗಬೇಕು ಹೇಳಿದರು.

ದೂರು: ಈ ಕುರಿತು ಮೃತರ ಸಹೋದರ ನೀಡಿದ ದೂರಿನಂತೆ, “ಪದ್ಮನಾಭ ಅವರು ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದು, ಮನೆಗೆ 2-3 ದಿನಗಳಿಗೊಮ್ಮೆ ಬರುತ್ತಿದ್ದರು. ಮಾ. 28ರಂದು ಪದ್ಮನಾಭ ಸಾಮಂತ್​ ಮನೆಯಲ್ಲಿರದೆ ಮೋಟಾರು ಸೈಕಲ್ ಮಾತ್ರ ಮನೆಯಲ್ಲಿದ್ದು, ರಾತ್ರಿ ದೂರವಾಣಿ ಕರೆಮಾಡಿದಾಗ ಕರೆಯನ್ನು ಸ್ವೀಕರಿಸಿರಲಿಲ್ಲ. ಮಾ.31ರಂದು ಬೆಳಗ್ಗೆ ಮೃತದೇಹ ತೋಟದ ಹತ್ತಿರ ಇರುವ ಗುಡ್ಡ ಜಾಗದಲ್ಲಿ ನೇಣು ಬಿಗಿದುಕೊಂಡಿರುವಂತೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದಿದೆ” ಎಂದು ದೂರು ನೀಡಿದ್ದಾರೆ.

ಈ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ 174 (3)(vi) ಸಿಆರ್​ಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios