ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಮನೆಮನೆಗೆ ತಲುಪಿಸುವ ಮೂಲಕ ಅಧಿಕಾರವನ್ನು ಒಳ್ಳೆಯ ರೀತಿಯಲ್ಲಿ ಜನರ ಬಳಿಗೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಜನ ಅಧಿಕಾರ ನೀಡಿದ್ದು, ಕರಾವಳಿ ಭಾಗದಲ್ಲೂ ಕಾಂಗ್ರೆಸ್‌ಗೆ ಶಕ್ತಿ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ ಜನರಿಗೆ ಕಾಂಗ್ರೆಸ್ ಸರಕಾರದ ಮೇಲೆ ವಿಶ್ವಾಸ ಬಂದಿದೆ. ನಮ್ಮನ್ನು ಅಧಿಕಾರಕ್ಕೆ ತಂದತಹ ಕಾರ್ಯಕರ್ತರನ್ನು ಯಾವತ್ತೂ ಮರೆಯಬಾರದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಪಡಿಸಲು ನಾನು ಸಮಯ ನೀಡಲು ಸಿದ್ಧನಿದ್ದೇನೆ. ಕಾಂಗ್ರೆಸ್ ಆಡಳಿತವನ್ನು ಕಂಡ ಪ್ರತಿಪಕ್ಷ ಬಿಜೆಪಿಯವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಂತೆ ಆಗಿದ್ದಾರೆ. ಕಾರ್ಯಕರ್ತರು ಯಾವುದೇ ವಿಚಾರದಲ್ಲೂ ಧೃತಿಗೆಡಬೇಕಿಲ್ಲ, ನಿಮ್ಮೊಂದಿಗೆ ಖಂಡಿತಾ ನಾವಿದ್ದೇವೆ. ಶಿಕ್ಷಣ ಇಲಾಖೆಯಲ್ಲಿ ಮತ್ತಷ್ಟು ಬದಲಾವಣೆಯಾಗಲಿದ್ದು, ಹಿಂದಿನ ಹೊಲಸು ವ್ಯವಸ್ಥೆಯನ್ನು ತೊಳೆದು ಬಿಡುತ್ತೇನೆ. ಟೀಕೆ ಟಿಪ್ಪಣಿಗಳಿಗೆ ತಲೆಕೊಂಡಿಲ್ಲ, ಸಾಮಾಜಿಕ ನ್ಯಾಯದಡಿ ತೃಪ್ತಿ ತರುವ ಕೆಲಸ ಮಾಡುತ್ತೇನೆ. ಸರಕಾರಿ ಶಾಲಾ-ಕಾಲೇಜು ಕ್ಯಾಂಪಸ್‌ಗಳಿಗೆ ತಾಗಿಕೊಂಡಿರುವ ಅಕ್ರಮ ಅಂಗಡಿ, ಮಳಿಗೆಗಳನ್ನು ತೆರವು ಮಾಡಲು ಸೂಚಿಸುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮಾದರಿಯಲ್ಲೇ ಮಧು ಬಂಗಾರಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಸಚಿವರ ಬಗ್ಗೆ ಈ ರಾಜ್ಯದ ಜನತೆ ಬಹು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಮಧು ಬಂಗಾರಪ್ಪರ ಮೂಲಕ ಮತ್ತಷ್ಟು ಒಳ್ಳೆಯ ಯೋಜನೆಗಳು ಅನುಷ್ಠಾನಕ್ಕೆ ಬರಲಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಕಾಂಗ್ರೆಸ್ ಮುಖಂಡ ಕಣಚೂರು ಮೋನು, ಮಾಜಿ ಮೇಯರ್ ಭಾಸ್ಕರ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿಶ್ವಾಸ್‌ದಾಸ್, ಮುಂಚೂಣಿ ಘಟಕಾಧ್ಯಕ್ಷರಾದ ಲಾರೆನ್ಸ್ ಡಿಸೋಜ, ಮನೋರಾಜ್ ರಾಜೀವ್, ಶುಭಾಷ್ ಕೊಲ್ನಾಡ್, ಸುಹಾನ್ ಆಳ್ವ, ಅಬ್ಬಾಸ್ ಅಲಿ, ನಾರಾಯಣ್ ನಾಯ್ಕ್, ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ನಾಯಕರು ಉಪಸ್ಥಿತರಿದ್ದರು.