ಮಂಗಳೂರು: ಗ್ರಾಮೀಣ ಭಾಗದ ಪ್ರತಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ ಕನ್ನಡ ಪತ್ರಿಕಾ ಲೋಕದ ಪಿತಾಮಹ ಡಾ.ಹೆರ್ಮನ್ ಮೊಗ್ಲಿಂಗ್ ಅವರ ಹೆಸರನ್ನು ಬೆಂಗಳೂರಿನಲ್ಲಿ ರಸ್ತೆಗೆ ಹೆಸರು ನಾಮಕರಣ, ಪ್ರತಿಮೆ ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದೆ.
ಸಿಎಂ ಸಿದ್ದರಾಮಯ್ಯ ಮಂಗಳೂರು ಪ್ರವಾಸದ ವೇಳೆ ಭೇಟಿ ಮಾಡಿದ ನಿಯೋಗ, ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಪತ್ರಿಕೆ ಆರಂಭಿಸಿ ಕನ್ನಡ ಪತ್ರಿಕೋದ್ಯಮದದ ಶಕೆಯನ್ನು ಆರಂಭಿಸಿದ ಮ್ಯೋಗ್ಲಿಂಗ್ ಅವರ ಪ್ರತಿಮೆಯಾಗಲಿ, ಅವರ ಹೆಸರಿನಲ್ಲಿ ರಸ್ತೆಯಾಗಲಿ, ವೃತ್ತಗಳಾಗಲಿ ಕರ್ನಾಟಕದಲ್ಲಿ ಎಲ್ಲಿಯೂ ಇರುವುದಿಲ್ಲ, ಈ ಹಿನ್ನೆಲೆಯಲ್ಲಿ ತಾವು ವಿಶೇಷ ಕಾಳಜಿ ವಹಿಸಿ ಈ ನಿಟ್ಟಿನಲ್ಲಿ ಕಾಳಜಿ ವಹಿಸಿ ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಹಾಗೂ ಹರ್ಮನ್ ಮ್ಯೋಗ್ಲಿಂಗ್ ಅವರ ಹೆಸರನ್ನು ಕನ್ನಡದ ಜನತೆ ಸದಾ ಸ್ಮರಣೆ ಮಾಡುವಂತಾಗಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ “ಮಂಗಳೂರ ಸಮಾಚಾರ-ಹೆರ್ಮನ್ ಮ್ಯೋಗ್ಲಿಂಗ್ ” ರಸ್ತೆ ನಾಮಕರಣ ಹಾಗೂ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಮನವಿ ಮಾಡಿತು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ, ಕೋಶಾಧಿಕಾರಿ ಗಿರಿಧರ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಪೆರ್ಲ ಇದ್ದರು.