ದೆಹಲಿ: ಕರ್ನಾಟಕಧ ಮುಖ್ಯಮಂತ್ರಿ ಗಾದಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ನೇರ ಪೈಪೋಟಿ ನಡೆದಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಗೆ ಕಗ್ಗಂಟಾಗಿ ಪರಿಣಮಿಸಿದೆ.
ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿ ಸಭೆಗಳ ಮೇಲೆ ಸಭೆಗಳು ನಡೆದಿವೆ. ಮೊದಲು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ನಂತರ ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಮಾತುಕತೆ ನಡೆಸಿದ್ದಾರೆ. ಬಳಿಕ ಸಂಜೆ ವೇಳೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ. ಶಿವಕುಮಾರ್ ಜೊತೆ 45 ನಿಮಿಷ ಹಾಗೂ ಸಿದ್ದರಾಮಯ್ಯರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಇಬ್ಬರ ವಾದಗಳನ್ನು ಆಲಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಕೆಲವೊಂದು ವಿಚಾರ ವಿವರಿಸಿ ಇಬ್ಬರ ಮನವೊಲಿಸಲು ನೋಡಿದ್ದಾರೆ. ಆದರೆ, ಉಭಯ ನಾಯಕರು ಪಟ್ಟು ಬಿಡದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಅಂತಿಮ ಸಭೆ ನಿಗದಿಪಡಿಸಲಾಗಿದೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಹೀಗಾಗಿ ಸಿಎಂ ಯಾರಾಗ್ತಾರೆ ಎಂಬ ಕುತೂಹಲ ಮುಂದುವರಿದಿದೆ.
“ಕರ್ನಾಟಕ ಸಿಎಂ ಸ್ಥಾನದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕಾಂಗ್ರೆಸ್ ಅಧ್ಯಕ್ಷರು ಇಬ್ಬರು ನಾಯಕರನ್ನು ಭೇಟಿ ಮಾಡಿದ್ದಾರೆ. ಈಗ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಖರ್ಗೆ ಅವರು ನಾಳೆ(ಬುಧವಾರ) ಸಂಜೆ ಸಿಎಲ್‌ಪಿ ಸಭೆ ಕರೆದು, ಬೆಂಗಳೂರಿನಲ್ಲಿಯೇ ನೂತನ ಸಿಎಂ ಹೆಸರನ್ನು ಪ್ರಕಟಿಸಬಹುದು” ಎಂದು ಮೂಲಗಳು ತಿಳಿಸಿವೆ.