ಮೈಸೂರು: ಕೆಪಿಪಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ನಿಧನದ ಬಗ್ಗೆ ಪ್ರಥಮ ಹಂತದ ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದು, ‘ಹೊಟ್ಟೆಹುಣ್ಣು ಒಡೆದು ಆಂತರಿಕ ತೀವ್ರ ರಕ್ತ ಸ್ರಾವದಿಂದಾದ ಹೃದಯ ಮತ್ತು ಶ್ವಾಸಕೋಶ ಸ್ತಂಭನದಿಂದ ಅವರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್, “ಡಿಎಂಆರ್ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 21 ಸುತ್ತು ಹೃದಯ ಪುನಶ್ಚೇತನ ಚಿಕಿತ್ಸೆ ನೀಡಲಾಯಿತು. ಆದರೂ ಶ್ವಾಸ ಹಾಗೂ ಹೃದಯ ಬಡಿತ ಚೇತರಿಸಲಿಲ್ಲ. ಅಲ್ಸರ್ ಒಡೆದು ತೀವ್ರ ರಕ್ತ ಸ್ರಾವದಿಂದ ದೇಹದಲ್ಲಿ ರಕ್ತಹೀನತೆ ಸಂಭವಿಸಿ ಹೃದಯಾಘಾತ, ಶ್ವಾಸಕೋಶದ ಪ್ರಕ್ರಿಯೆ ಸ್ಥಗಿತ ಸಂಭವಿಸಿತ್ತು. ಕೊನೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“ಶುಕ್ರವಾರ ಇಡೀ ದಿನ ವಿವಿಧ ಪ್ರವಾಸ ಮಾಡಿದ್ದ ಧ್ರುವನಾರಾಯಣ ಅವರು ಅಂದು ರಾತ್ರಿ 10ಕ್ಕೆ ನನಗೆ ಫೋನ್ ಮಾಡಿ ಸ್ವಲ್ಪ ದೈಹಿಕ ಸ್ವಾಸ್ಥ್ಯ ಇದೆ ಎಂದು ಹೇಳಿಕೊಂಡಿದ್ದರು. ಈಗಲೇ ತಪಾಸಣೆಗೆ ಬನ್ನಿ ಎಂದು ನಾನು ಕರೆದಿದ್ದೆ. ನಾಳೆ ಬೆಳಿಗ್ಗೆ ಬರುತ್ತೇನೆ” ಹೇಳಿರುವುದಾಗಿ ವೈದ್ಯರ ತಂಡದಲ್ಲಿದ್ದ ಡಾ.ಸದಾನಂದ ತಿಳಿಸಿದ್ದಾರೆ. ಇವರು ಧ್ರುವನಾರಯಣ ಅವರ ದೈನಂದಿನ ಆರೋಗ್ಯ, ನಿಯಮಿತ ತಪಾಸಣೆ ಮಾಡುತ್ತಿದ್ದರು ಮತ್ತು ಸ್ಥಳೀಯ ನಿವಾಸಿಯಾಗಿದ್ದಾರೆ.
ಇಂದು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿ ವಾಪಸಾಗಿದ್ದ ಧ್ರುವನಾರಾಯಣ ಅವರು ಮನೆಯ ಮೇಲಿನ ಮಹಡಿಯಿಂದ ಕಾರು ಚಾಲಕನನ್ನು ಕರೆದಿದ್ದರು. ಚಾಲಕ ತೆರಳಿ ನೋಡುವಷ್ಟರಲ್ಲಿ ವಾಂತಿ, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿಧನರಾಗಿದ್ದಾರೆ.