ದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದ ಜತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶಕ್ಕೆ ದಿಲ್ಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮುಂದಿಟ್ಟ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಮತ್ತು ಎಎಪಿ ನಾಯಕನಿಗೆ ಜಾಮೀನು ಮಂಜೂರು ಮಾಡುವಾಗ ಈ ಅಂಶಗಳನ್ನು ಪರಿಗಣನೆಗೆ ತೆಗೆದು ಕೊಂಡಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ರಜಾಕಾಲದ ಪೀಠದ ತಿಳಿಸಿದೆ.
ವಿಚಾರಣಾ ನ್ಯಾಯಾಲಯವು ಇ.ಡಿಗೆ ವಾದಿಸಲು ಸಾಕಷ್ಟು ಸಮಯಾವಕಾಶವನ್ನು ನೀಡಬೇಕಿತ್ತು ಎಂದ ನ್ಯಾಯಮೂರ್ತಿ, ಜಾಮೀನು ಆದೇಶಕ್ಕೆ ತಡೆ ನೀಡಿದರು.
ಕೇಜ್ರಿವಾಲ್ ಅವರಿಗೆ ವಿಚಾರಣಾ ನ್ಯಾಯಾಲಯವು ಜೂನ್ 20ರಂದು ಜಾಮೀನು ಮಂಜೂರು ಮಾಡಿತ್ತು. 1 ರೂ.ಲಕ್ಷ ವೈಯಕ್ತಿಕ ಬಾಂಡ್ ಮೇಲೆ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಮರು ದಿನವೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ವಿಚಾರಣಾ ನ್ಯಾಯಾಲಯದ ಆದೇಶವು ತರ್ಕಕ್ಕೆ ವಿರುದ್ಧವಾಗಿದ್ದು, ಏಕಪಕ್ಷೀಯ ಹಾಗೂ ತಪ್ಪಿನಿಂದ ಕೂಡಿದೆ. ಅಪ್ರಸ್ತುತ ಸಂಗತಿಗಳ ಆಧಾರದಲ್ಲಿ ಜಾಮೀನು ನೀಡಲಾಗಿದೆ ಎಂದು ವಾದಿಸಿತು. ಆಗ ಪೀಠವು ಜಾಮೀನು ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.
ದಿಲ್ಲಿ ಹೈಕೋರ್ಟ್ ಆದೇಶವನ್ನು ಒಪ್ಪುವುದಿಲ್ಲ. ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಎಎಪಿ ಹೇಳಿದೆ.