ಬೆಂಗಳೂರು: “ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಭಾರತೀಯ ಜನತಾ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ ನೆಲದ ಕಾನೂನಿನ ಬಗ್ಗೆ ಅವರಿಗಿರುವ ತಿರಸ್ಕಾರವೂ ಹೌದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, “ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿ ನಾಯಕರ ಮುಂದೆ ಈಗ ಇರುವುದು ಎರಡೇ ಆಯ್ಕೆ. ಒಂದೋ ಹೆಗಡೆಯನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಬೇಕು ಇಲ್ಲವೇ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ಘೋಷಿಸಬೇಕು. ನೋಡೋಣ ಇದೇ ವಿಷಯದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿ” ಎಂದು ಸವಾಲೆಸೆದಿದ್ದಾರೆ.
“ಅನಂತ್ ಕುಮಾರ್ ಹೆಗಡೆ ನಿರಂತರವಾಗಿ ಸಂವಿಧಾನದ ವಿರುದ್ಧ ಮಾತ್ರ ಹೇಳಿಕೆ ನೀಡಿದ್ದಲ್ಲ, ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಹೇಳಿದ್ದಾರೆ. ದಲಿತರನ್ನು ನಾಯಿಗಳು ಎಂದು ದೂಷಿಸಿದ್ದಾರೆ. ಮನುಸ್ಮೃತಿಯನ್ನು ಬಹಿರಂಗವಾಗಿ ಸಮರ್ಥಿಸಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ತುಚ್ಚಕರಿಸಿ ಮಾತನಾಡಿದ್ದಾರೆ. ಆಗಲೂ ಬಿಜೆಪಿ ಹೆಗಡೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಯಾಕೆಂದರೆ ಹೆಗಡೆ ಮಾತುಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮನದ ಮಾತುಗಳೂ ಆಗಿತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.